ಬೆಳಕನು ಬೀರುವ ಜ್ಯೋತಿಗಳಂತೆ
ಕಂಪನು ಸೂಸುವ ಪುಷ್ಪಗಳಂತೆ
ಸಾರ್ಥಕ ಜೀವನ ಬಾಳೋಣ
ನಾಡಿನ ಸೇವೆಯ ಮಾಡೋಣ || ಪ ||
ಹುಟ್ಟು – ಸಾವು ದಡಗಳ ನಡುವೆ
ಹರಿಯುವ ಪಾವನ ಜೀವನದಿ
ನೀರುಣಿಸುತ ಬಾಯಾರಿದ ಧರೆಗೆ
ಸೇರಲಿ ಧ್ಯೇಯದ ಸಾಗರದಿ || 1 ||
ಕಂಬನಿಯೊರೆಸುವ ಕಾಯಕವೆಮದು
ಬೆಂಬಲಕಿದೆ ದೃಢ ಸಂಕಲ್ಪ
ಆದರ್ಶದ ಅಡಿಗಲ್ಲಿನ ಮೇಲೆ
ಅರಳಲಿ ನವಭಾರತ ಶಿಲ್ಪ || 2 ||
ಅಕ್ಷಯ ಸ್ಫೂರ್ತಿಯ ಅಮಿತೋತ್ಸಾಹದ
ಕರ್ಮಯೋಗಿ ಅಜಿತರ ತೆರದಿ
ಪೂರ್ಣ ಸಮರ್ಪಿತ ಭಾವನೆಯಿಂದ
ಸಾಗುವ ಸೇವೆಯ ಸತ್ಪಥದಿ || 3 ||