ಬೆಳಗಾಗುತಲಿದೆ ಹಿಂದೂ ಭುವಿಗೆ

ಬೆಳಗಾಗುತಲಿದೆ ಹಿಂದೂಭುವಿಗೆ
ಕಳೆದಿದೆ ಕತ್ತಲೆ ತೆರಳಿದೆ ಗವಿಗೆ || ಪ ||

ಕನಸೆನಿಸಿದ ತಿಳಿ ಕೇಸರಿ ಬಣ್ಣ
ಕಡುಗತ್ತಲಿನಲೇ ತೆರೆಸಿತು ಕಣ್ಣ
ಕಪ್ಪದು ಕೆಂಪಾಯಿತು ಕ್ಷಣ ಕ್ಷಣದಿ
ಕೇಸರಿಯೇರಿತು ಗಗನಾಂಗಣದಿ
ಬಂತಿದೋ ಕಾಲವು ಉದಯದ ರವಿಗೆ
ಬೆಳಗಾಗುತಲಿದೆ ಹಿಂದೂ ಭುವಿಗೆ || 1 ||

ಹೃದಯಾಂತರ್ಯದಿ ಚಿಂತನ ಹೊಮ್ಮಿ
ಮೈಮನದೊಳು ಚೇತನ ಸೆಲೆ ಚಿಮ್ಮಿ
ಕಸುವುಕ್ಕಲು ಹಾಸಿಗೆಯನು ಒದ್ದು
ನೆಗೆಯಿತು ಯೌವನ ಬಲ ಸಿಡಿದೆದ್ದು
ಭೇರಿಯ ಕರೆ ಕೇಳುತಲಿರೆ ಕಿವಿಗೆ
ಬೆಳಗಾಗುತಲಿದೆ ಹಿಂದೂಭುವಿಗೆ || 2 ||

ನಿನ್ನೆಯ ಸುಖದಾ ನೆನಪಿನ ಬುತ್ತಿ
ಹಳಸದೆ ಉಳಿದಿದೆ ಪರಿಮಳ ಬಿತ್ತಿ
ಉಣಬೇಕಿದೆ ; ಉಣಿಸಲು ಬೇಕಿದನು
ಆರ್ಯರ ಜೀವನಮೌಲ್ಯ ಸುಧೆಯನು
ಅರಿವಾಗುತಲಿದೆ ಮಾನವಜೀವಿಗೆ
ಬೆಳಗಾಗುತಲಿದೆ ಹಿಂದೂಭುವಿಗೆ || 3 ||

ಕ್ಷುದ್ರ ಕನಸುಗಳ ಛಿದ್ರವಗೊಳಿಸಿ
ನಿದ್ರೆಯ ಜಡತೆಯ ಮುದ್ರೆಯನಳಿಸಿ
ಬಾಂಧವ್ಯದ ಆದರ್ಶವ ತಾಳುತ
ಒಂದಾಗುತಲಿದೆ ತರುಣರ ಭಾರತ
ಕಾಣುತಲಿದೆ ಹಿರಿಯರ ಕೈದೀವಿಗೆ
ಬೆಳಗಾಗುತಲಿದೆ ಹಿಂದೂಭುವಿಗೆ || 4 ||

Leave a Reply

Your email address will not be published. Required fields are marked *

*

code