ಬನ್ನಿ ತೊರೆಗಳೆ ಬನ್ನಿ ನದಿಗಳೆ

ಬನ್ನಿ ತೊರೆಗಳೆ ಬನ್ನಿ ನದಿಗಳೆ
ಸಾಮರಸ್ಯದ ಜಲಧಿಯೆಡೆಗೆ |
ನಿಮ್ಮ ಏಕಾಂತವನು ತೊರೆದು
ಕರವ ಜೋಡಿಸಿ ಕಡಲ ತೆರೆಗೆ…..ಸ್ವರವ ಕೂಡಿಸಿ ಒಡಲ ಕರೆಗೆ || ಪ ||

ಸೂರ್ಯನಾ ಧಗೆ ಬಿಸಿ ಬಿಸಿಲ ಹಗೆ ನಿಮ್ಮ ಒಡಲನು ಸುಡುತಿರೆ
ನಲಿವ ಅಲೆಗಳ ಮಧುರ ಮಂಜುಳ ಸ್ವರವು ಸಂಕಟ ಪಡುತಿರೆ
ಕಾವು ಸಾವನು ತರುವ ಮುನ್ನ ನಿಮ್ಮ ಘನ ಅಸ್ತಿತ್ವಕೆ
ಬನ್ನಿ ಧಾವಿಸಿ ಪೂರ್ಣ ವೇಗದಿ ಹಾತೊರೆದು ಅಮರತ್ವಕೆ || 1 ||

ನಿಮ್ಮ ಹಮ್ಮನು ತ್ಯಜಿಸಿ ಸುಮ್ಮನೆ ನೆಮ್ಮದಿಯ ಪಥ ಪಿಡಿಯಿರಿ
ಧುಮ್ಮಿಕ್ಕುತ ಹರಿದು ಜಲಧಿಯ ಭವ್ಯಗಾತ್ರವ ಪಡೆಯಿರಿ
ನಿಮ್ಮ ಇರುವಿಗೆ ಬೆಲೆಯು ಲಭಿಸಲಿ, ನಿಮ್ಮ ಹರಿವಿಗೆ ಬೆಂಬಲ
ಬಿಂದು ಬಿಂದುವು ಸಿಂಧುವಾಗಲಿ, ಸಫಲವಾಗಲಿ ಹಂಬಲ || 2 ||

ಮುಗಿಲ ಚುಂಬಿಸುವಂಥ ಗಿರಿಗಳ ಗರ್ಭದಲಿ ಜನ್ಮವನು ತಳೆದು
ನಾಡ ನಾಡಿಗಳಲ್ಲಿ ಪ್ರವಹಿಸಿ ಹಸಿರ ಸಮೃದ್ಧಿಯನು ಬೆಳೆದು
ಮನುಜ ಕೋಟಿಯ ದಾಹ ತಣಿಸುತ ಸೇರ ಬನ್ನಿರಿ ಸಾಗರ
ಯುಗಯುಗಂಗಳ ಘನ ಪರಂಪರೆ ಮುಂದುವರಿಸಿ ನಿರಂತರ || 3 ||

Leave a Reply

Your email address will not be published. Required fields are marked *

*

code