ಅವನ ಸ್ಮೃತಿಗಳು ಕೊನರಿ

ಅವನ ಸ್ಮೃತಿಗಳು ಕೊನರಿ ಕವನ ಕುಸುಮಗಳರಳಿ
ಚೈತ್ರ ಚೇತನದೆದುರು ಜಡ ಸಮಾಧಿ
ಹಸಿರಾದ ಭಾವಗಳ ಹೊಸ ಬೆಳಕಿನಲಿ ಬೆಳೆಸಿ
ದೃಢಗೊಳಿಸ ಬಂತಿದೋ ಹೊಸ ಯುಗಾದಿ
ಅವನ ನೆನಪಿಗೆ ಬಂತೊ ಹೊಸ ಯುಗಾದಿ || ಪ ||

ಭೀಮಕಾಯದ ಸುಮನ ಕೋಮಲ ಕಮನೀಯ
ಮೆಚ್ಚುಗೆಯ ಬಿಟ್ಟಿರುವ ಲೋಕ ಕುಣಿಸಿ
ಹತ್ತಿರಕೆ ಕರೆದು ನೀನಾರೆಂದು ಏಕೆಂದು
ಹೊಚ್ಚ ಹೊಸ ತನು ತೊಡಿಸಿ, ಉಣಿಸಿ, ಮಣಿಸಿ,
ಎತ್ತರಕೆ ಬೆಳೆದವನ ನೆನಪಿದೋ ನಾಡಿನಲಿ
ಲೋಕ ಕಂಡಿದೆ ಇಲ್ಲಿ ಹೊಸದು ಹಾದಿ || 1 ||

ಉಂಡವರು ಉಣದವರು ಉಣಲಾಗದಿರುವವರು
ಇರುವರಿಲ್ಲಿಯೇ ಉಣದೆ ಉಣಿಸಿದವರು
ಮೇಲಿನವ ಮೊದಲಿನವ ಮೂಲೆಯವ ಮತ್ತಿನವ
ಇರುವರಿಲ್ಲಿಯೇ ಎಲ್ಲ ಮೀರಿದವರು
ಹಿಂದು ಭಾವದೊಳಿವರು ಒಂದಾಗಿ ಹೋಮಿಸಲು
ಸಿದ್ಧಗೊಳಿಸಿಹನಿಲ್ಲಿ ಯಜ್ಞವೇದಿ || 2 ||

ಬಲ್ಲವರು ಬಹಳಿಲ್ಲ ಇವನಾಳ ಎತ್ತರವ
ಎತ್ತರವನೇರಿಯೇ ಕಾಣಬೇಕು
ಕಾಣುತಿದೆ ನಕ್ಷತ್ರ ಉಳಿದಿಹುದು ಆಕಾಶ
ಆಗಸದಲೂ ದೀಪ ಉರಿಸಬೇಕು
ಹಣತೆಯಿದು ಮಿನುಗುತಿದೆ ತೆರೆದ ಕಂಗಳ ಮುಂದೆ
ತೋರುತಿದೆ ಅವನಡೆದ ಹಾದಿಬೀದಿ || 3 ||

Leave a Reply

Your email address will not be published. Required fields are marked *