ಅಸದಳ ಕಾರ್ಯವ ಸಾಧಿಸಿ ತೋರುವ
ಯುವಮನಸುಗಳೇ ಮೇಲೇಳಿ
ಕನಸಲಿ ಅರಳಿಹ ಚಿತ್ತಾರಗಳಿಗೆ
ರಂಗನು ತುಂಬಲು ಎದ್ದೇಳಿ || ಪ ||
ತ್ಯಾಗಸ್ವಭಾವದಿ ಸೇವೆಯ ಗುಣದಲಿ
ನಮಗೆಣೆಯಿಲ್ಲ ಸರಿಮಿಗಿಲು
ಬಲದಾರಾಧನೆ ನಿತ್ಯವು ನಡೆದಿದೆ
ಕೊಡಲಿಗೆ ಮಣಿಯಿತು ಪಡುಗಡಲು || 1 ||
ಶಂಕರ ಮಧ್ವರ ಸಿದ್ಧಾಂತಗಳಿವೆ
ನಾರಾಯಣ ಗುರು ಉಪದೇಶ
ಕನಕನಿಗೊಲಿದ ಮುರುಳಿಯ ನಾದದಿ
ಸಮರಸತೆಯ ಸ್ವರವಿನ್ಯಾಸ || 2 ||
ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ
ಕೇಳದೆ ಸಂತನ ಉದ್ಘೋಷ
ಪಡುವಣ ಕಡಲಿನ ಮೊರೆತಕೆ ಮರುದನಿ
ಭಾರತ ಮಾತೆಯ ಜಯಘೋಷ || 3 ||