ಅರುಣನು ನಿನ್ನಲಿ ಪಡಿಮೂಡಿಹನೋ
ನೀನೇ ಅರುಣನ ಆವರಿಸಿಹೆಯೋ
ತರುಣಜನಾಂಗಕೆ ಸ್ಫೂರ್ತಿಯ ತುಂಬಲು
ನೀ ಭಾರತ ಭುವಿಗವತರಿಸಿದೆಯೋ
ಓ ಕೇಸರಿ ಜಗವಂದ್ಯನೆ … ಗುರು ಕೇಸರಿ ಶತವಂದನೆ || ಪ ||
ಬಾನ್ಧರೆ ಬೆಸೆಯುವ ಬಾಂಧವನಾಗಿ ಕಂಗೊಳಿಸಿಹೆ ಬಾನಂಗಳದಿ
ಹಿಂದುತ್ವದ ಸಂಚಾಲಕನಾಗಿ ಮೆರೆಯುತಿಹೆ ಹಿಂದೂ ನೆಲದಿ
ನಿನ್ನ ವಿಹಂಗಮ ರೂಪವ ಬಿಂಬಿಸಿ ಪಾವನವಾಗಿವೆ ಸಾಗರ ಜಲಧಿ || 1 ||
ಗುರಿಯನು ಅರಿಯದೆ ತಿರುಗುವ ಜನಕೆ ಬಾಳಿನ ರೀತಿಯ ತೋರಿರುವೆ
ದೈನ್ಯ ನಿರಾಶೆಯ ಪೊರೆಯನು ಹರಿದು ನಾಡಿನ ಭೀತಿಯ ನೀಗಿರುವೆ
ಮೈಗೂಡಿಹ ಮೈಮರೆವನು ಅಳಿಸಿ ಅಕ್ಷಯ ಸ್ಫೂರ್ತಿಯ ನೀ ನೀಡಿರುವೆ || 2 ||
ತ್ಯಾಗತಪೋಮಯ ಭಾರತಭೂಮಿ ಭೋಗಲಾಲಸೆಗೆ ಒಳಗಾಗಿ
ಪತನದ ಪಥದಲಿ ಸಾಗುತಲಿರಲು ಕ್ಷುದ್ರಜೀವನಕೆ ತಲೆಬಾಗಿ
ನೀನೆತ್ತಿದೆ ಈ ರಾಷ್ಟ್ರವನೆತ್ತರ ವಂದಿಪೆ ನಿನಗೆ ಸನಾತನಯೋಗಿ || 3 ||
ಗತ ಇತಿಹಾಸದ ಶತಗಾಥೆಗಳ ಪ್ರತಿನಿಧಿಸಿಹ ಪ್ರತಿಭಾನ್ವಿತನೆ
ಹತ ಆಕಾಂಕ್ಷೆಗೆ ಜೀವವ ತುಂಬಿಹ ಮೃತ್ಯುಂಜಯ ಮಹಿಮಾನ್ವಿತನೆ
ತ್ರಿಭುವನ ವ್ಯಾಪಕ ಜನಮನನಾಯಕ ಗುರುಭಗವಾಧ್ವಜ ನಾಮಾಂಕಿತನೆ || 4 ||