ಅರಳಲಿದೆ ನವಭಾರತ ದೇಶ

ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ
ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ ||

ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ
ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ
ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 ||

ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ
ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ
ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 ||

ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ
ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ
ಮೂಡಲಿದೆ ನೂತನ ಆಶೋತ್ತರ ಹತ ಆಕಾಂಕ್ಷೆಗಳಿಂದ || 3 ||

ದುಡುಕಿದ ಅನುಜರ ಸಿಡುಕಿನ ಕೃತ್ಯವು ತಂದಿರೆ ನಾಡಿಗಪಾಯ
ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅಂತ್ಯವಿದಾಯ
ಉಕ್ಕಲಿದೆ ಸಂಜೀವಿನಿ ಅಮೃತ ಹಾಲಾಹಲದೆಡೆಯಿಂದ || 4 ||

Leave a Reply

Your email address will not be published. Required fields are marked *

*

code