ಅನುಜತ್ವಕೆ ಮನುಜತ್ವಕೆ

ಅನುಜತ್ವಕೆ ಮನುಜತ್ವಕೆ
ಘನತತ್ವದ ಸ್ವೀಕಾರಕೆ
ಕಿವಿಗೊಟ್ಟೆವು ಓಗೊಟ್ಟೆವು ಒಕ್ಕೊರಲಿನಲಿ
ಜನದುಃಖದ ಪರಿಹಾರಕೆ
ದನುಜತ್ವದ ಸಂಹಾರಕೆ
ಪಣತೊಟ್ಟೆವು ಅಡಿಯಿಟ್ಟೆವು ಒಗ್ಗಟ್ಟಿನಲಿ || ಪ ||

ಸುಜ್ಞಾನದ ವಿಜ್ಞಾನದ
ಪೂಜೆಗೆ ಬೆಳಗಲಿ ಉಜ್ವಲ ಪ್ರಾಣದ ಪ್ರಣತಿ
ಆಕ್ರಮಕರ ಕಂಡೊಡನೆಯೆ
ಕೆರಳುತ ಕಾಳ್ಗಿಚ್ಚಾಗುತ
ಕಾಲಸ್ವರೂಪದಿ ಧಗಧಗಿಸಲಿ ಈ ಜ್ಯೋತಿ || 1 ||

ಅಮೃತ ಮಂತ್ರವ ಸಾರುತ
ಉದಿಸುತಲಿದೆ ನವ ಭಾರತ
ಇತಿಹಾಸ ಪುರಾಣಗಳಾಳದ ಉಸಿರಿಂದ
ಭಾಗ್ಯೋದಯ ಕಣ್ತುಂಬಿದೆ
ಪ್ರಭೆ ಚಿಮ್ಮಿದೆ ಬಲ ಹೊಮ್ಮಿದೆ
ಪ್ರೇರಣೆ ಪುಟಿದಿದೆ ಬುವಿಯಾಳದ ಬಸಿರಿಂದ || 2 ||

ನವಸ್ಫೂರ್ತಿಯ ತೆರೆ ಮೊರೆದಿದೆ
ತಾರುಣ್ಯದ ಸ್ವರ ಕರೆದಿದೆ
ಬಲಿದಾನಕೆ ಭೋರ್ಗರೆದಿದೆ ರುಧಿರಪ್ರವಾಹ
ಇದು ನಿಲ್ಲದು ನಿಲಲೊಲ್ಲದು
ವಿಜಯದ ಯಾತ್ರೆಯು ನಮ್ಮದು
ಆರದು ಜ್ಯೋತಿಯು ತೀರದು ಗೆಲವಿನ ದಾಹ || 3 ||

ತೆರೆತೆರೆವೆವು ನವಕ್ಷಿತಿಜವ
ದೊರಕಿಸುವೆವು ಚಿರವೈಭವ
ಸ್ವದೇಶ ಸೇವೆಗೆ ಮೀಸಲು ತೋಳಿನ ಶಕ್ತಿ
ಒಮ್ಮನದಲಿ ಒಮ್ಮುಖದಲಿ
ತಾಯ್ನಾಡಿನ ಸಮ್ಮುಖದಲಿ
ಆನಂದದೊಳರ್ಪಿಸುವೆವು ಹೃದಯದ ಭಕ್ತಿ || 4 ||

Leave a Reply

Your email address will not be published. Required fields are marked *

*

code