ಕರುಳಿನ ಕರೆ ಕೇಳಿಸದೆ

ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ
ತೆರಳದಿರಿ ಮೋಹಕದ ನಗರಿಯೆಡೆಗೆ
ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ
ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ ||

ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ
ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ
ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು
ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 ||

ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ
ಮುಕ್ತರಾಗುತ ತಾಯ ಮಡಿಲಿನೆಡೆಗೆ.
ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು
ಸ್ತನ್ಯ ಸುಧೆಯನು ಮುದದಿ ಉಣಿಸುವೆಡೆಗೆ || 2 ||

ಕದ ತೆರೆದ ಸರಳ ಮನ, ಮುದಗೊಳಿಪ ಬಂಧುಜನ
ಹದವರಿತ ಜೀವನದ ನೆರಳಿನೆಡೆಗೆ.
ಭಜನ,ಭೋಜನ,ಭವನ,ಭಾಷೆ,ಭೂಷಣ,ಭ್ರಮಣ
ತನ್ನತನವನ್ನು ಮೆರೆವ ಸದನದೆಡೆಗೆ || 3 ||

ಗ್ರಾಮ ಜೀವನದಿಂದ ರಾಮರಾಜ್ಯದ ಕನಸು
ನನಸು ಮಾಡಲು ಬನ್ನಿ ತವರು ನೆಲಕೆ
ಆತ್ಮನಿರ್ಭರರಾಗಿ ಸ್ವಾಭಿಮಾನದಿ ಬದುಕಿ
ಭಾರತದ ಸಂದೇಶ ಸಾರಿ ಜಗಕೆ || 4 ||

Leave a Reply

Your email address will not be published. Required fields are marked *

*

code